ಚಾರ್ ಮೀನು-

ಸಾಲ್ಮೊನೀಫಾರ್ಮಿಸ್ ಗಣದ ಸ್ಯಾಲ್ಮಾನಿಡೆ ಕುಟುಂಬಕ್ಕೆ ಸೇರಿದ ಒಂದು ಸಾಗರವಾಸಿ ಮೀನು. ಯೂರೋಪಿನ ಮೂಲವಾಸಿ. ಸ್ಯಾಮನ್ ಮತ್ತು ಟ್ರೌಟ್ ಮೀನುಗಳ ಸಂಬಂಧಿಯಾದ ಇದು ಅವನ್ನು ಬಹುಮಟ್ಟಿಗೆ ಹೋಲುತ್ತದೆ. ಆದರೆ ಚಾರ್ ಮೀನಿನಲ್ಲಿ ಸೀರಿಕಾಸ್ಥಿಯ ಮೇಲೂ (ವೋಮರ್) ಹಲ್ಲುಗಳಿವೆ. ಉಳಿದೆರಡರಲ್ಲಿ ಈ ರೀತಿ ಇಲ್ಲ. ಚಾರ್ ಮೀನು ಸ್ಕಾಂಡಿನೇವಿಯ, ಸ್ಕಾಟ್‍ಲೆಂಡ್, ಐರ್ಲೆಂಡ್ ಮತ್ತು ಯೂರೋಪಿನ ಇತರ ದೇಶಗಳ ಸಾಗರಗಳಲ್ಲಿ ಕಾಣದೊರೆಯುತ್ತದೆ. ಇದು ಪ್ರಮುಖವಾಗಿ ಸಾಗರವಾಸಿಯಾದರೂ ಮೊಟ್ಟೆಗಳನ್ನಿಡಲು ಮಾತ್ರ ಸಿಹಿನೀರಿನ ನದಿ, ಸರೋವರಗಳಿಗೆ ವಲಸೆ ಬರುತ್ತದೆ. ಬಲುವರ್ಣಮಯವಾದ ಮೀನಿದು. ದೇಹದ ಮೇಲ್ಭಾಗ ನೀಲಿ ಬಣ್ಣದ್ದು. ಪಾಶ್ರ್ವಗಳಲ್ಲಿ ಕಿತ್ತಳೆ ಬಣ್ಣದ ಮಚ್ಚೆಗಳಿವೆ. ಹೊಟ್ಟೆಯ ಭಾಗ ಗುಲಾಬಿ ಬಣ್ಣದ್ದು. ದೇಹದ ಮೇಲೆಲ್ಲ ಸೈಕ್ಲಾಯಿಡ್ ಇಲ್ಲವೆ ಟೀನಾಯಿಡ್ ಮಾದರಿಯ ಶಲ್ಕಗಳಿವೆ.

ತಲೆಯ ಮೇಲೆ ಮಾತ್ರ ಶಲ್ಕಗಳಿಲ್ಲದಿರುವು ಈ ಮೀನಿನ ವಿಚಿತ್ರ ಲಕ್ಷಣ. ಬೆನ್ನಿನ ಈಜುರೆಕ್ಕೆಯ ಹಿಂಭಾಗದಲ್ಲಿ ಮೇದಸ್ಸಿನಿಂದ ಕೂಡಿದ ಈಜುರೆಕ್ಕೆಯೊಂದಿದೆ. ಗಂಟಲಿನ ಬಳಿ ಹೊರತೆರೆಯುವ ಸರಳರೀತಿಯ ವಾಯುಚೀಲವನ್ನು ಕಾಣಬಹುದು. ಇದು ಉಸಿರಾಟಕ್ಕೆ ಸಹಕಾರಿ. ಚಾರ್‍ಮೀನಿನಲ್ಲಿ ಸ್ಪೈರಕಲ್, ಕೋನಸ್ ಆರ್ಟೀರಿಯೋಸಸ್, ಆಪ್ಟಿಕ್ ಕಯಾಸ್‍ಮೆ ಮತ್ತು ಕರುಳಿನ ಸ್ಟೈರಲ್ ಗೋಡೆಗಳು ರೂಪುಗೊಂಡಿಲ್ಲ. ಗಂಡಿನಲ್ಲಿ ಅಂಡಾಶಯಗಳು ಮೂತ್ರಪಿಂಡಗಳಿಂದ ಬೇರೆಯಾಗಿವೆ. ಮೊಟ್ಟೆಯಿಂದ ಹೊರಬರುವ ಮರಿಗಳು ಅರ್ಧ ಬೆಳೆದ ಸ್ಥಿತಿಯಲ್ಲಿದ್ದು ತಮ್ಮ ಬೆಳೆವಣಿಗೆಯನ್ನು ನೀರಿನಲ್ಲಿ ಮುಂದುವರಿಸಿ ಪ್ರೌಢಾವಸ್ಥೆಗೆ ಬರುತ್ತವೆ. ಚಾರ್ ಮೀನು ಒಂದು ಒಳ್ಳೆಯ ಆಹಾರಮೀನೆಂದು ಹೆಸರಾಗಿದೆ.
(ಎನ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ